
‘ಫಾರಿನ್ ಸ್ಟೈಲ್’ಯಲ್ಲಿ ಪ್ರಪೋಸ್ ಮಾಡುತ್ತೀನಿ ಎಂದು ಪ್ರಿಯಕರನಿಗೆ ಬೆಂಕಿ ಹಚ್ಚಿ ಕೊಂದ ಪ್ರಿಯತಮೆ!
ಬೆಂಗಳೂರು: ರಾಜಧಾನಿಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ‘ವೆಸ್ಟರ್ನ್ ಸ್ಟೈಲ್’ನಲ್ಲಿ ಪ್ರಪೋಸ್ ಮಾಡುವುದಾಗಿ ನಂಬಿಸಿ ಪ್ರಿಯತಮೆಯೇ ತನ್ನ ಪ್ರಿಯಕರನನ್ನು ಜೀವಂತವಾಗಿ ಸುಟ್ಟು ಕೊಂದಿರುವ ದಾರುಣ ಘಟನೆ ಬ್ಯಾಡರಹಳ್ಳಿಯಲ್ಲಿ ವರದಿಯಾಗಿದೆ.
ಘಟನೆಯ ವಿವರ:
ಮೃತ ಕಿರಣ್ ಮತ್ತು ಆರೋಪಿ ಯುವತಿ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಕೆಲವು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಮಂಗಳವಾರ ಯುವತಿಯ ಮನೆಯಲ್ಲಿ ಯಾರೂ ಇಲ್ಲದಿದ್ದ ಸಮಯ ನೋಡಿ ಕಿರಣ್ ಅಲ್ಲಿಗೆ ಬಂದಿದ್ದರು. ಈ ವೇಳೆ ಯುವತಿಯು “ನಿನಗೆ ವಿದೇಶಿ ಶೈಲಿಯಲ್ಲಿ ವಿಭಿನ್ನವಾಗಿ ಪ್ರಪೋಸ್ ಮಾಡುತ್ತೇನೆ” ಎಂದು ನಂಬಿಸಿ ಕಿರಣ್ ಅವರ ಕೈಕಾಲು ಕಟ್ಟಿ, ಕಣ್ಣಿಗೆ ಬಟ್ಟೆ ಕಟ್ಟಿದ್ದಾಳೆ. ನಂತರ ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ ಎನ್ನಲಾಗಿದೆ.
ಪೊಲೀಸ್ ತನಿಖೆ:
ಬೆಂಕಿ ಹಚ್ಚಿದ ಪರಿಣಾಮ ಕಿರಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಷಯ ತಿಳಿದ ಬ್ಯಾಡರಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಆರೋಪಿ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಘೋರ ಕೃತ್ಯಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.
ಪ್ರೀತಿಯ ಹೆಸರಿನಲ್ಲಿ ನಡೆದ ಈ ಅಮಾನುಷ ಕೊಲೆ ನಗರದ ಜನತೆಯನ್ನು ಆತಂಕಕ್ಕೀಡು ಮಾಡಿದೆ.
Comments are closed.